ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಲ್ಲಿ ಯುವತಿ ಹಾಗು ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಕಾಮುಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಪುಲಕೇಶಿ ನಗರದಲ್ಲಿ ಅಪರಿಚಿತ ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ಆಟೋ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಅಪರಿಚಿತ ಯುವತಿ ತನ್ನ ಸ್ನೇಹಿತನ ಜತೆ ಅಂಗಡಿ ಮುಂದೆ ನಿಂತಿದ್ದಳು. ಈ ವೇಳೆ ಆಟೋ ಚಾಲಕ ಮಣಿ ಎಂಬಾತ ಫೋನ್ ನಂಬರ್ ಕೇಳಿದ್ದಲ್ಲದೇ, ಯುವತಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಘಟನೆಯಿಂದ ಬೇಸತ್ತ ಯುವತಿ ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿ ಮಣಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಇತ್ತೀಚೆಗೆ ನಗರದ ಸುದ್ದಗುಂಟೆ ಪಾಳ್ಯದಲ್ಲಿ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿ ಪರಾರಿಯಾಗಿದ್ದ ಘಟನೆ ಸಾಕಷ್ಟು ಚರ್ಚೆ ಆಗಿತ್ತು. 10 ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ.
ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನ ಬಂಧನ
ಇನ್ನು ಇತ್ತೀಚೆಗೆ ನಗರದ ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಆರೋಪಿ ಕಾರ್ತಿಕ್ನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಪ್ರಿಲ್ 13 ರಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಓರ್ವ ಮಹಿಳೆ ತೆರಳುತ್ತಿದ್ದರು. ಈ ವೇಳೆ ಎದುರು ಮನೆಯಲ್ಲಿ ವಾಸವಾಗಿರುವ ಆರೋಪಿ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ.
ಇದನ್ನು ಪ್ರಶ್ನೆ ಮಾಡಿದ ಮಹಿಳೆ ಪತಿ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೂ ಆರೋಪಿ ಅಟ್ಯಾಕ್ ಮಾಡಿದ್ದ. ಎರಡನೇ ಮಹಡಿಯಿಂದ ಹಾಲೋ ಬ್ಲಾಕ್, ಹೂವಿನ ಪಾಟ್ ಕೆಳ ಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ. ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿತ್ತು.ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.