ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಆಗಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿದ್ದವು. ಇದೀಗ ಕೊಂಚ ಬಿಡುವು ಮಾಡಿಕೊಂಡಿದ್ದ ಮಳೆರಾಯ ಇಂದು ಮತ್ತೆ ಅಬ್ಬರಿಸಿದ್ದು, ಭಾರಿ ಮಳೆಯಿಂದಾ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸಂಪೂರ್ಣ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಮನೆಗೆ ತೆರಳಲು ಪರದಾಟ ನಡೆಸಿದರು.
ಹೌದು ಆರ್ಆರ್ ನಗರ, ಕೆಂಗೇರಿ, ವಿಜಯನಗರ, ಬ್ಯಾಟರಾಯನಪುರ, ಚಂದ್ರಲೇಔಟ್, ಜ್ಞಾನಭಾರತಿ, ನಾಗರಬಾವಿ, ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವೆಡೆ ನಗರದ ಹಲವೆಡೆ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಸುಮ್ಮನಹಳ್ಳಿ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಪರದಾಡಿದರು. ಟ್ರಾಫಿಕ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕೆಲಕಾಲ ಸುರಿದ ಮಳೆಯಿಂದ ಗೊರಗುಂಟೆಪಾಳ್ಯ ಬಳಿ ರಸ್ತೆ ಮೇಲೆ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಗೊರಗುಂಟೆಪಾಳ್ಯ-ಪೀಣ್ಯಾ ಸಂಪರ್ಕ ರಸ್ತೆ ಜಲಾವೃತಗೊಂಡಿದೆ. ನಿಂತ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ.ಇನ್ನು ಸುಮನಹಳ್ಳಿ ಜಂಕ್ಷನ್ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯಿಂದ ಸಂಚರಿಸುವಂತೆ ವಾಹನ ಸವಾರರಲ್ಲಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.