ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ನಡು ರಾತ್ರಿ ಯುವತಿಯರಿಬ್ಬರರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ಯುವಕನೊಬ್ಬ ಯುವತಿಯನ್ನು ಗೋಡೆಗೆ ಒರಗಿಸಿ ಖಾಸಗಿ ಅಂಗ ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡಿ ಓಡಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಸುದ್ದಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಕೇರಳದಲ್ಲಿ ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಸಂತೋಷ್ ಎಂಬಾತನನ್ನು ಬಂಧನ ಮಾಡಲಾಗಿದ್ದು, ಬೆಂಗಳೂರಿಗೆ ಕರೆತರಲಾಗಿದೆ. ಈತ ಬೆಂಗಳೂರಿನ ತಿಲಕನಗರದ ಗುಲ್ಬರ್ಗಾ ಕಾಲೋನಿಯ ನಿವಾಸಿಯಾಗಿದ್ದು, ವೈಟ್‌ಫೀಲ್ಡ್ ವ್ಯಾಪ್ತಿಯ ಕಾರು ಶೋರೂಮ್‌ವೊಂದರಲ್ಲಿ ಕಾರು ಚಾಲಕನಾಗಿದ್ದ.
ಘಟನೆ ಹಿನ್ನೆಲೆ?
ಏಪ್ರಿಲ್ 3ರಂದು ಮುಂಜಾನೆ ಸುಮಾರು 1.55ಕ್ಕೆ ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ, ಆಕೆಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡ ಪರಿಣಾಮ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ.
ಆರೋಪಿಯ ವಿಕೃತಿ ಘಟನಾ ಸ್ಥಳದ ಪಕ್ಕದಲ್ಲಿದ್ದ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಿರುಕುಳ ಅನುಭವಿಸಿದ ಯುವತಿಯರು ಘಟನೆ ಸಂಬಂಧ ಯಾವುದೇ ದೂರು ನೀಡಿರಲಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಕೃತ್ಯವೆಸಗಿರುವದು ತಾನೇ ಎಂದು ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ.