ಬೆಂಗಳೂರು : ಬೆಂಗಳೂರಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತ ಗೃಹಿಣಿ ಒಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಶಾಲಕ್ಷ್ಮೀ ಹಿರೇಮಠ (32) ಎಂದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲಿ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೋಣನಕುಂಟೆಯಲ್ಲಿ ವಾಸವಾಗಿರುವ ವಿಶಾಲಕ್ಷ್ಮೀ 14 ವರ್ಷಗಳ ಹಿಂದೆ ಶಂಭುಲಿಂಗಯ್ಯ ಎಂಬುವರೊಂದಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಮೃತರ ಪತಿ ಖಾಸಗಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೃತ ಮಹಿಳೆ ಮೂಲತಃ ಹಾವೇರಿ ಮೂಲದ ಗೃಹಿಣಿಯಾಗಿದ್ದು, ಈಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಾರಣ ಎಂದು ವರದಿಯಾಗಿದೆ.