ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಮಾದಕ ದ್ರವ್ಯ ಮಾರಾಟ ಹೆಚ್ಚಾಗುತ್ತಿದ್ದು, ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ದಂಪತಿಗಳು ಇಬ್ಬರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೌದು ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯರಪ್ಪನಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಮೈಕಲ್ ಓಕೆಲಿ, ಮತ್ತು ಬೆಂಗಳೂರಿನ ಸಹನಾ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಮೈಕಲ್ 2018ರಲ್ಲಿ ಬಿಸಿನೆಸ್ ವಿಸಾದ ಮೇಲೆ ಬೆಂಗಳೂರಿಗೆ ಆಗಮಿಸಿದ್ದ.ಮೊದಲು ಮೈಕಲ್ ಕೆಆರ್ ಪುರಂ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಈ ವೇಳೆ ಪಕ್ಕದ ಮನೆಯಲ್ಲಿದ್ದ ಸಹನಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಇಬ್ಬರು ಜೊತೆಗೂಡಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.ಬಳಿಕ ಕೆಆರ್ಪುರಂನಿಂದ ಯರಪ್ಪನಹಳ್ಳಿ ಗ್ರಾಮಕ್ಕೆ ಶಿಫ್ಟ್ ಆಗಿದ್ದಾರೆ.
ಕಳೆದ ಜುಲೈನಲ್ಲಿ ಸಿಸಿಬಿ ಪೊಲೀಸರು ಡ್ರಗ್ ಹೆಡ್ಲರ್ ಆರೋಪಿಯನ್ನು ಬಂಧಿಸಿದ್ದರು ಆತನನ್ನು ಉಚ್ಚಾರಣೆಗೆ ಒಳಪಡಿಸಿದಾಗ ಮೈಕಲ್ ಮತ್ತು ಸಹನಾ ಕುರಿತು ಬಾಯಿ ಬಿಟ್ಟಿದ್ದಾನೆ. ಈತನ ಒಂದು ಹೇಳಿಕೆಯ ಆಧಾರದ ಮೇಲೆ ಆರೋಪಿ ಮೈಕಲ್ ಯರಪ್ಪನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ವೇಳೆ 1 ಕೆಜಿಗೂ ಅಧಿಕ ಎಂಡಿಎಂಎ, ಮೂರು ಮೊಬೈಲ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ ವಶಕ್ಕೆ ಪಡೆದಿದ್ದಾರೆ.