ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಇಂದು ಕೂಡ ಬೆಂಗಳೂರಿನ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಇದೀಗ ವಿಜಯನಗರದ ಎಂ.ಸಿ ಲೇಔಟ್ ನಲ್ಲಿ ಬೃಹತ್ ಮರ ಧರೆಗೆ ಉರುಳಿದೆ.
ಹೌದು ವಿಜಯನಗರದಲ್ಲಿ ಬೃಹತ್ ಮರ ಧರೆಗೆ ಉರುಳಿ ಬಿದ್ದಿದೆ. ಈ ವೇಳೆ ಆಟೋ ಒಂದು ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಚಾಲಕ, ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.ಇದೀಗ ಉರುಳಿ ಬಿದ್ದ ಮರವನ್ನು ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.
ಇನ್ನೂ ಕಳೆದ ಆಗಸ್ಟ್ 13 ರಂದು ಮಾರುತಿ ಸೇವಾನಗರದಲ್ಲಿ ಬೃಹತ್ ಮರದ ಕೊಂಬೆ ಪಾದಚಾರಿಗಳ ಮೇಲೆ ಬಿದ್ದು ಶಾಲೆಗೆ ತೆರಳುತ್ತಿದ್ದ ಬಾಲಕಿ ಸೇರಿ 6 ಮಂದಿ ಗಾಯಗೊಂಡಿದ್ದರು.ಘಟನೆಯಲ್ಲಿ ಮಹಿಳೆಯೊಬ್ಬರ ಕಾಲು ಮುರಿದಿತ್ತು. ಓರ್ವ ವ್ಯಕ್ತಿಯ ಎದೆಗೆ ಪೆಟ್ಟಾಗಿದ್ದು ಬೆನ್ನುಮೂಳೆ ಮುರಿದಿದೆ. ಈ ವೇಳೆ ಗಾಯಳುಗಳನ್ನ ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.