ಬೆಂಗಳೂರು : ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ ಇಂದು ಏರ್ ಶೋ 2025ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದರು. ಏರೋ ಇಂಡಿಯಾ ಏರ್ ಶೋ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ನಿನ್ನೆ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಹೌದು ನಿನ್ನೆ ತಾನೆ ಪೊಲೀಸರಿಗೆ ನೀಡಿದ್ದ ಬೆಳಗಿನ ಉಪಹಾರದಲ್ಲಿ ಜಿರಳೆ ಪತ್ತೆಯಾಗಿದ್ದು ಕೆಲವು ಪೊಲೀಸರು ತಿಂಡಿ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದರು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪೊಲೀಸ್ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ಯಶವಂತಪುರ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು.
ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿತ್ತು. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿತ್ತು. ಅದನ್ನು ನೋಡಿ ಪೊಲೀಸ್ ಸಿಬ್ಬಂದಿ ಶಾಕ್ ಗೆ ಒಳಗಾಗಿದ್ದರು.