ಬೆಂಗಳೂರು : ಬಳ್ಳಾರಿಯಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿ, ಅಗತ್ಯಬಿದ್ರೆ ತನಿಖೆಯನ್ನು ಸಿಐಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಸ್ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡ್ತೇನೆ. ಅಗತ್ಯಬಿದ್ದರೆ ಸಿಐಡಿಗೆ ಕೊಡುತ್ತೇವೆ. ಪೊಲೀಸರ ಗನ್ ಹಾಗೂ ರಿವಾಲ್ವರ್ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್ನಿಂದ ಫೈರಿಂಗ್ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ ಎಂದು ಗೃಹ ಸಚಿವರು ಹೇಳಿದ್ದಾರೆ.
ತಮಗೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೆಶ್ವರ್, ಶಾಸಕರ ಲೆಟರ್ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ವಾಪಸಾದ ಮೇಲೆ ಗಲಾಟೆ ಎಂಬ ವಿಚಾರ ಕಾಕತಾಳೀಯವೋ ಏನೋ ಗೊತ್ತಿಲ್ಲ, ಆದರೆ ಅವರು ಬಂದ ಮೇಲೆ ಕಲಹ ಆಗಿರೋದು ನಿಜ ಎಂದು ತಿಳಿಸಿದ್ದಾರೆ.








