ನವದೆಹಲಿ : ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು ಮೇ 4ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಎಚ್ ವೈ ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳು ತೆರವಾಗಿವೆ. ಇಂದು ಈ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಬಿರುಸಿದ ಸಿದ್ದತೆ ನಡೆಯುತ್ತಿದೆ.
ಬಾಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪೈಪೋಟಿ ನಡೆಯುತ್ತಿದೆ. ದಾವಣಗೆರೆ ದಕ್ಷಿಣಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವುದು ಕಾಂಗ್ರೆಸ್ ಮುಸ್ಲಿಂ ಮುಖಂಡರ ಬೇಡಿಕೆಯಾಗಿದೆ. ಆದರೆ ಇದಕ್ಕೆ ಸಚಿವ ಎಸ್ ಎಸ್ ಮಲ್ಲಕಾರ್ಜುನ ಅವರ ವಿರೋಧ ಇದೆ.
ಇನ್ನು ಬಿಜೆಪಿಯಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೈಪೋಟಿ ಇದೆ. ಜಿಎಸ್ ಸಿದ್ದೇಶ್ವರ ಮತ್ತು ಎಂಪಿ ರೇಣುಕಾಚಾರ್ಯ ಬಣಗಳ ನಡುವೆ ಟಿಕೆಟ್ ಗಾಗಿ ಪೈಪೋಟಿ ಇದೆ. ಈ ಭಿನ್ನಮತದ ಹಿನ್ನೆಲೆಯಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ಭಿನ್ನಮತ ಶಮನ ಮಾಡುವ ನಿಟ್ಟಿನಲ್ಲಿ ಜಿಲ್ಲೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಭೇಟಿ ನೀಡಿ ಮಾತುಕತೆ ನಡೆಸಿದ್ದರು.








