ಹಾವೇರಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಅನೇಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಡೆದಿದ್ದವು. ಆದರೆ ಹಾವೇರಿಯಲ್ಲಿ ಸಾಲ ಕೊಟ್ಟ ವ್ಯಕ್ತಿಯೇ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ನಗರದ ನಗರದ ಇಜಾರಿ ಲಕಮಾಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕನನ್ನು ವಿನಾಯಕ್ ಸುರೇಶ ಕಂಬಾಳಿಮಠ (34) ಎಂದು ತಿಳಿದುಬಂದಿದೆ. ವಿನಾಯಕ್ ಆತ್ಮಹತ್ಯೆಗು ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾರೆ.ಸ್ನೇಹಿತರು ಹಾಗೂ ಇತರರು ನನ್ನ ಬಳಿ ಸಾಲ ಪಡೆದಿದ್ದರು. ಅದನ್ನು ವಾಪಸು ಕೊಟ್ಟಿಲ್ಲ. ಅದನ್ನು ವಸೂಲಿ ಮಾಡಿ ನನ್ನ ಮನೆಯವರಿಗೆ ಕೊಡಿಸಿ ಎಂದು ವಿನಾಯಕ್ ವಿಡಿಯೊದಲ್ಲಿ ಹೇಳಿರುವುದಾಗಿ ಗೊತ್ತಾಗಿದೆ.
ವಿನಾಯಕ್ ಅವರು ತಮ್ಮ ಆಸ್ತಿಯನ್ನು ಈ ಹಿಂದೆ ಮಾರಾಟ ಮಾಡಿದ್ದರು. ಅದರಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಅದೇ ಹಣವನ್ನು ಕೆಲವರಿಗೆ ನೀಡಿದ್ದರು. ಹಣ ಪಡೆದವರು ವಾಪಸು ನೀಡದೇ ವಂಚಿಸಿದ್ದರು. ಇದರಿಂದ ವಿನಾಯಕ್ ನೊಂದಿದ್ದರೆಂದು ಹೇಳಲಾಗುತ್ತಿದೆ. ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಹಾಗೂ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನಾಯಕ ಸಹೋದರಿ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.