ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಬಿಬಿಎಂಪಿ ಗೇಟ್ ಬಿದ್ದು 10 ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಹಾಯಕ ಅಭಿಯಂತರ ಟಿ ಶ್ರೀನಿವಾಸ್ ರಾಜು ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪಯುಕ್ತರು ಆದೇಶ ಹೊರಡಿಸಿದ್ದಾರೆ.
ಹೌದು ಸಹಾಯಕ ಅಭಿಯಂತರ ಟಿ ಶ್ರೀನಿವಾಸ್ ರಾಜುರನ್ನು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 2022 ರಲ್ಲಿ ದತ್ತಾತ್ರೇಯ ವಾರ್ಡ್ ನ AE ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ ರಾಜು, ಪ್ರಸ್ತುತ ರಾಜಾಜಿನಗರದ ವಾರ್ಡ್ ನ AE ಕಾರ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ಲಕ್ಷದ ಆರೋಪದ ಅಡಿ ಇದೀಗ ಟಿ.ಶ್ರೀನಿವಾಸ್ ರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಹಿನ್ನೆಲೆ?
ನಿನ್ನೆ ಬಿಬಿಎಂಪಿ ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ನಿರಂಜನ್ ಮೃತ ಬಾಲಕ. ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮಗುವಾದ ನಿರಂಜನ್, ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಕೊನೆಯುಸಿರೆಳೆದಿದೆ. ಮೃತ ನಿರಂಜನ್ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ಜೊತೆಗೆ ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಫೈಪ್ ಲೈನ್ನಲ್ಲಿ ಈ ಕುಟುಂಬ ವಾಸವಾಗಿತ್ತು.
ಇದೆ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು, ಮೃತ ಬಾಲಕ ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.ರಾಜ್ಯಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ 5 ಲಕ್ಷ ರೂ.ಹಾಗೂ ನಮ್ಮ ಬ್ಲಾಕ್ ಕಾಂಗ್ರೆಸ್ ಕಮಿಟಿಯಿಂದ 5 ಲಕ್ಷ ಸೇರಿದಂತೆ ಒಟ್ಟು 10 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.ಮೃತ ಬಾಲಕ ನಿರಂಜನ್ ತಂದೆ ವಿಜಯ್, ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್‌ಗೆ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.