ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ತೀವ್ರ ವಿರೋಧ, ಗದ್ದಲದ ನಡುವೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿಯ ಮಸೂಧೆಯನ್ನು ಅಂಗೀಕಾರ ನೀಡಲಾಯಿತು.
ಮುಸ್ಲಿಂ ಗುತ್ತಿಗೆದಾರರಿಗೆ ಟೆಂಡರ್ ಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿತ್ತು.
ಈ ಮಸೂದೆಯಲ್ಲಿ ಒಂದು ಕೋಟಿಯವರೆಗಿನ ಕಾಮಗಾರಿಗಳಲ್ಲಿ ಮುಸ್ಲೀಮರಿಗೆ ಮೀಸಲಾತಿ, ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿ, ಮುಸ್ಲೀಂ ಸಮುದಾಯಕ್ಕೂ ಮೀಸಲಾತಿ ವಿಸ್ತರಿಸಿ ಗುತ್ತಿಗೆ ನೀಡಲು ಅವಕಾಶ ನೀಡಲಾಗಿತ್ತು.
ಎಸ್.ಸಿ ಎಸ್.ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿಯವರೆಗಿನ ಮೊತ್ತ ವಿಸ್ತರಿಸಿ 2 ಕೋಟಿಯವರೆಗೆ ಮೀಸಲಾತಿ ಅವಕಾಶ ನೀಡಲಾಗಿದೆ. ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸಂಪುಟ ಅನುಮೋದನೆ ನೀಡಿತ್ತು. ಇಂದು ವಿಧಾನಸಭೆಯಲ್ಲಿ ಮಂಡಿಸಿ, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ವಿಧೇಯಕ ಅಂಗೀಕಾರವನ್ನು ಪಡೆದಿದೆ.