ಬೆಂಗಳೂರು : ಈ ಹಿಂದೆ ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಸೇರಿದಂತೆ ಎಫ್ಡಿಎ ಎಸ್‌ಡಿಎ ಪರೀಕ್ಷೆಯಲ್ಲೂ ಕೂಡ ಭಾರಿ ಅಕ್ರಮ ನಡೆದಿತ್ತು. ಇದೀಗ ಆರ್ಮಿ ಗ್ರೂಪ್ ಸಿ ಪರೀಕ್ಷೆಯಲ್ಲಿ ಕಳ್ಳಾಟ ಮಾಡಿರುವ ಆರೋಪ ಕೇಳಿಬಂದಿದೆ. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್ ಡಿವೈಸ್ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಈ ಸಂಬಂಧ 18 ಮಂದಿ ಆಭ್ಯರ್ಥಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ ಮೆಂಟ್ ನ ಗ್ರೂಪ್ ಸಿ ಯ ಲೋಯರ್ ಡಿವಿಜನ್ ಕ್ಲರ್ಕ್ ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆಯು ಹಲಸೂರಿನ 515 ಆರ್ಮಿ ಬೇಸ್ ವರ್ಕ್ ಶಾಪ್ ನಲ್ಲಿ ಭಾನುವಾರ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಪರೀಕ್ಷೆ ನಡೆದಿತ್ತು. ಈ ವೇಳೆ ಒಟ್ಟು 18 ಜನ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರೋದು ಪತ್ತೆಯಾಗಿತ್ತು.
ಇದಕ್ಕೆ ಸಾಕ್ಷಿ ಎಂಬಂತೆ ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಗಳು ಇರುವುದು ಕಂಡುಬಂದಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 18 ಮಂದಿ ಆಭ್ಯರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. 515 ಆರ್ಮಿ ಬೇಸ್ ವರ್ಕ್ ಶಾಪ್ ನ ಸೆಕ್ಯೂರಿಟಿ ಆಫೀಸರ್ ಫಾರ್ ಕಮಾಂಡೆಂಟ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್, ಜ್ಯೋತಿರ್ಲಿಂಗಮ್ ಅವರು ದೂರು ನೀಡಿದ್ದಾರೆ.
ಅವರ ದೂರಿನ ಅನ್ವಯ ಇದಿಗ ಸುರೇಂದರ್, ಸಂದೀಪ್, ಮೊಂಟಿ ಅಜಯ್ ಕುಮಾರ್, ಅನುಜ್, ರಾಹುಲ್, ರಾಜೇಂದ್ರ ಸುಮೀತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್, ಅಮನ್ ರೇದು, ರಜತ್, ವಿನಯ್, ಅಂಕಿತ್ ಹಾಗೂ ಅಮನ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.








