ಕಲಬುರ್ಗಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಇದುವರೆಗೂ ಅನೇಕ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಮಾಡಿದ್ದರು ಸಹ ಈ ಒಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಇದೀಗ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮತ್ತೊಂದು ಜೀವ ಬಲಿಯಾಗಿದ್ದು ಕಲ್ಬುರ್ಗಿಯಲ್ಲಿ ನೇಣು ಬಿಗಿದುಕೊಂಡು ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.ಚಂದ್ರಕಾಂತ ಪೂಜಾರಿ (35) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಕಲಬುರಗಿ ನಗರದ ಸಿದ್ದಾರೂಢ ಕಾಲೋನಿ ನಿವಾಸಿಯಾಗಿದ್ದ ಚಂದ್ರಕಾಂತ, ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಚಂದ್ರಕಾಂತ ತಮ್ಮ ಸ್ನೇಹಿತರಿಗೆ ಆಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದಾರೆ. ನಾನು ರೊಕ್ಕಕ್ಕಾಗಿ ಸಾಯುತ್ತಿಲ್ಲ, ಮಂದಾಕಿನಿ ಪಾಟೀಲ್ ಮತ್ತು ಅವರ ಮಗನ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಮೃತ ಚಂದ್ರಕಾಂತ ಪೂಜಾರಿ, ಹೋಟೆಲ್ ಉದ್ಯಮಿ ಮಂದಾಕಿನಿ ಮತ್ತು ಅವರ ಮಗ ಶರಣು ಪಾಟೀಲ್ ಅವರಿಂದ 40,000 ರೂ. ಸಾಲ ಪಡೆದಿದ್ದರು. ಸಾಲ ತೀರಿಸಲು 50,000 ರೂ. ನೀಡಿದ್ದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.