ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮಹಿಳೆಯ ಗರ್ಭದಲ್ಲೇ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ಎಂಟೂವರೆ ತಿಂಗಳ ಗರ್ಭಿಣಿ ಮಹಿಳೆಗೆ ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಪಿಡ್ಸ್ ಬಂದು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಯಮಕನಮರಡಿಯ ಪಾಟೀಲ್ ಅಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ರಾಧಿಕಾಳನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಹಣ ಕಟ್ಟಿದ್ರೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಕೆಎಲ್ ಇ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ದೊಡ್ಡ ಮೊತ್ತ ಕಟ್ಟಲಾಗದೇ ರಾಧಿಕಾರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಿದ ಆಸ್ಪತ್ರೆಗೆ ಅಲೆಯುವ ವೇಳೆ ರಾಧಿಕಾ ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟು 6 ಗಂಟೆ ಕಳೆದಿದ್ರೂ ಹೊಟ್ಟೆಯಲ್ಲೇ ಮಗು ಇದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.