ದಕ್ಷಿಣಕನ್ನಡ : ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ಪುತ್ತೂರು ತಾಲೂಕಿನ ಬನ್ನೂರು ಸಮೀಪ ಜೈನರಗುರಿಯಲ್ಲಿ ನಡೆದಿದೆ.
ಹೌದು ಈ ಒಂದು ಘಟನೆ ಇಂದು ನಸುಕಿನ ಜಾವದಲ್ಲಿ ನಡೆದಿದ್ದು, ಕುಟುಂಬದ ಸದಸ್ಯರು ಬೆಳಗಿನ ಜಾವ ನಿದ್ದೆಯಲ್ಲಿದ್ದರು ಈ ಸಂದರ್ಭ ಮನೆ ಮೇಲೆ ಧರೆ ಕುಸಿದಿದೆ. ಈ ವೇಳೆ ಮಣ್ಣಿನ ಅಡಿ ಮಕ್ಕಳು ಸಿಲುಕಿಕೊಂಡಿದ್ದರು. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ ಮಕ್ಕಳು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಮೇಲೆ ಧರೆ ಕುಸಿದಿದ್ದರಿಂದ ಗೋಡೆ ಕುಸಿದ ಬೆನ್ನಲ್ಲೇ ಇಬ್ಬರು ಮಕ್ಕಳನ್ನ ಮನೆಯವರು ಪಾರು ಮಾಡಿದ್ದಾರೆ. ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿ ಉಂಟಾಗಿದೆ. ಮಜೀದ್ ಮತ್ತು ಇಬ್ಬರು ಮಲಗಿದ್ದ ಕೊಠಡಿ ಮೇಲೆ ಮಣ್ಣು ಬಿದ್ದಿತ್ತು.
ತಕ್ಷಣ ಎಚ್ಚೆತ್ತು ಮಣ್ಣಿನಡಿ ಇದ್ದ ಇಬ್ಬರು ಮಕ್ಕಳನ್ನ ತಂದೆ ಮಜೀದ್ ಪಾರು ಮಾಡಿದ್ದಾರೆ. ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.