ಕೊಪ್ಪಳ : ಸೆಲ್ಫಿ ತೆಗೆದುಕೊಳ್ಳುವ ವೇಳೆ ಅನೇಕ ಅವಘಡ ಸಂಭವಿಸಿ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಸಹ ಜನರು ಕ್ಯಾರೆ ಎನ್ನದೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಸೆಲ್ಫಿ ಕ್ರೇಜ್ ಗೆ ಮತ್ತೊಂದು ದುರಂತ ಸಂಭವಿಸಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಬೆಟ್ಟದ ಮೇಲಿಂದ ಜಾರಿ ಬಿದ್ದು ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ದುರಂತದಲ್ಲಿ ಗಾಯಗೊಂಡ ಯುವತಿಯನ್ನು ರಾಯಚೂರು ಜಿಲ್ಲೆಯ ಅಶ್ವಿನಿ ಎಂದು ಗುರುತಿಸಲಾಗಿದ್ದು, ಬೆಟ್ಟದ ಮೇಲೆ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಯತಪ್ಪಿ ಬೆಟ್ಟದ ಮೇಲಿಂದ ಬಿದ್ದಿದ್ದಾಳೆ. ಗಾಯಗೊಂಡ ಅಶ್ವಿನಿಯನ್ನು ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಕುರಿತಂತೆ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.