ಬೆಂಗಳೂರು : ಬೆಂಗಳೂರಿನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಭೀಕರ ಕೊಲೆ ಮಾಸುವ ಮುನ್ನವೇ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಕತ್ತರಿಗುಪ್ಪೆಯಲ್ಲಿ ರೌಡಿಶೀಟರ್ ಗಳು ಲಾಂಗು ಮಚ್ಚಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ಹೌದು ಬೆಂಗಳೂರಿನಲ್ಲಿ ನಡುರಸ್ತೆಯಲ್ಲಿ ಇದೀಗ ಮತ್ತೊಮ್ಮೆ ಲಾಂಗು ಮತ್ತು ಮಚ್ಚುಗಳು ಝಳಪಿಸಿವೆ. ಸಿ.ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಕತ್ತರಿಗುಪ್ಪೆಯಲ್ಲಿ ಈ ಒಂದು ಘಟನೆ ನಡೆದಿದೆ. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ರೌಡಿಶೀಟರ್ ಗಳ ಹಾವಳಿಗೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಅಭಿ ಹಾಗೂ ದೀಪಕ್ ಮೇಲೆ ರೌಡಿಶೀಟರ್ ಪ್ರದೀಪ ಮತ್ತು ಗ್ಯಾಂಗ್ನಿಂದ ಹಲ್ಲೆ ನಡೆಸಲಾಗಿದೆ. ಪ್ರದೀಪ್ ಅಲಿಯಾಸ್ ಜೂಲಿ ಹಾಗೂ ಆತನ ತಂಡದಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೆ ಒಳಗಾದ ಅಭಿ ಎಂಬಾತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.