ಬೆಂಗಳೂರು : 2025 ಹೊಸ ವರ್ಷ ಆರಂಭವಾದಾಗಿನಿಂದ ಸರ್ಕಾರ KSRTC ಪ್ರಯಾಣದ ದರ, ಮೆಟ್ರೋ ಟಿಕೆಟ್ ಪ್ರಯಾಣದ ದರ ಹಾಗು ಹಾಲಿನ ದರ ಏರಿಕೆ ಮಾಡಿತ್ತು. ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರದಲ್ಲೇ ಆಟೋ ಪ್ರಯಾಣದ ದರ 18 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು ರಾಜ್ಯದ ಜನತೆ ಹಲವು ಬೆಲೆ ಏರಿಕೆಗಳಿಂದ ತತ್ತರಿಸಿರುವ ನಡುವೆಯೇ ಆಟೋ ಪ್ರಯಾಣ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಆಟೋರಿಕ್ಷಾ ದರವು ಈಗಿರುವ 30 ರೂ.ಗಳಿಂದ 36 ರೂ.ಗಳಿಗೆ ಮತ್ತು ನಂತರದ ಪ್ರತಿ ಕಿಲೋಮೀಟರ್ ಶುಲ್ಕವು 15 ರೂ.ಗಳಿಂದ 18 ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು ನಗರ ಡಿಸಿ ಕಚೇರಿಯ ಮೂಲಗಳ ಪ್ರಕಾರ, ಪರಿಷ್ಕೃತ ದರಗಳು ರೂ 36 ಮತ್ತು ರೂ 18 ಆಗಿದ್ದು, ಬೆಂಗಳೂರು ನಗರ ಡಿಸಿ ಜಗದೀಶ ಜಿ ಅವರ ಅನುಮೋದನೆಗಾಗಿ ಕಾಯುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ತನಿಖೆಯ ಕಾರ್ಯವನ್ನು ಬೆಂಗಳೂರು ಡಿಸಿ ವಹಿಸಿದ್ದಾರೆ ಹಾಗೂ ಆ ಕೆಲಸದಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ, ಈಕೆಲಸಗಳು ಮುಗಿದ ನಂತರ, ದರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪರಿಷ್ಕೃತ ದರಗಳು ರೂ 40 ಮತ್ತು ರೂ 20 ಆಗದಿದ್ದರೆ ಹೋರಾಟ ನಡೆಸುವುದಾಗಿ ಆಟೋರಿಕ್ಷಾ ಚಾಲಕರ ಸಂಘ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದಂತಹ ಆಟೋ ಒಕ್ಕೂಟಗಳು ತಿಳಿಸಿವೆ. 2021 ರಿಂದ ದರಗಳನ್ನು ಪರಿಷ್ಕರಿಸಲಾಗಿಲ್ಲ. ಈ ಎಲ್ಲಾ ವರ್ಷಗಳಲ್ಲಿ, ಅನೇಕ ವಸ್ತುಗಳ ಬೆಲೆಗಳು ಹೆಚ್ಚಿವೆ. ಆಟೋ ದರ ಪರಿಷ್ಕರಣೆಯನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಲಿಂಕ್ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದರು.