ರಾಯಚೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಹಗರಣದ ಸುಳಿಯಲ್ಲಿ ಸಿಲುಕಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಹೀಗೆ ಸಾಲು ಸಾಲು ಹಗರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿದೆ. ಇದೀಗ ಮತ್ತೊಂದು ಹಗರಣ ಬಯಲಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ತಹಶೀಲಾರ್ ಕಚೇರಿಯಲ್ಲಿ 1.87 ಕೋಟಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಬಳಕೆಗೆ ಬಂದಿದೆ.
ಹೌದು ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ 1 ಕೋಟಿ 87 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಡಿಎ ಯಲ್ಲಪ್ಪ ತನ್ನ ಕುಟುಂಬದ ಸದಸ್ಯರ ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯಲ್ಲಪ್ಪ ತನ್ನ ಮಗ ವಿಶಾಲ್ ಮಾಲೀಕತ್ವದ ವಿಶಾಲ್ ಡೆಕೋರೇಟರ್ಸ್ ಖಾತೆಗೆ 1 ಕೋಟಿ 98 ಸಾವಿರ ಹಣ, ಪುತ್ರಿ ದೀಪಾ ಹೆಸರಿನ ದೀಪಾ ಟೆಕ್ಸ್ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ ರೂ. ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ರೂ. ಅನ್ನು ಅಕ್ರಮವಾಗಿ ವರ್ಗಾಯಿಸಿದ್ದಾನೆ ಎಂದು ತಿಳಿದುಬಂದಿದೆ.
ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಿದ್ದ ನೈಸರ್ಗಿಕ ವಿಕೋಪದ ಪರಿಹಾರದ ಹಣವನ್ನು ತಹಶೀಲ್ದಾರ್ ಕಚೇರಿಯಲ್ಲಿ ಎಸ್ಡಿಎಯಾಗಿದ್ದ ಯಲ್ಲಪ್ಪ ಲಿಂಗಸುಗೂರಿನ ಖಾಸಗಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಜೊತೆ ಸೇರಿ ತನ್ನ ಮಗ, ಮಗಳು, ಪತ್ನಿ ಖಾತೆಗೆ ಅಕ್ರಮವಾಗಿ ವರ್ಗಾಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.