ಕೋಲಾರ : ಈಗಾಗಲೇ ಕರ್ನಾಟಕದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಇದರ ಬೆನ್ನಲ್ಲೆ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಹಾಲು ಒಕ್ಕೂಟದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ವ ಪಕ್ಷದ ವಿರುದ್ಧ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಗಂಭೀರವಾದ ಆರೋಪ ಮಾಡಿದ್ದಾರೆ.
ಹೌದು ಈ ಕುರಿತಂತೆ ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲೂರು ಕಾಂಗ್ರೆಸ್ ಶಾಸಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಪರೋಕ್ಷವಾಗಿ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಹಾಲಿ ಶಾಸಕ ಕೆ.ವೈ.ನಂಜೇಗೌಡ ವಿರುದ್ದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿರುಗಿಬಿದಿದ್ದಾರೆ. ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ಹಾಗೂ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬರುತ್ತಿದೆ.
ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ವಿಗಂಡಣೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಒಕ್ಕೂಟದ ಎಂಡಿ ಗೋಪಾಲಮೂರ್ತಿ ಅಕ್ರಮ ಕೂಟ ಕಟ್ಟಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕ್ಷೇತ್ರದ ವಿಗಂಡಣೆ ಮಾಡಿ ಕೋಲಾರ ಜನತೆಗೆ ಮೋಸ ಮಾಡಿದ್ದಾರೆ. ಒಕ್ಕೂಟದಲ್ಲಿ ಯಾರು ಪ್ರಶ್ನೆ ಮಾಡಬಾರದೆಂದು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಒಕ್ಕೂಟದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ಹಾಲು ಒಕ್ಕೂಟಕ್ಕೆ ಹೊಳಲಿ ಗ್ರಾಮದ ಬಳಿ 50 ಎಕರೆ ಭೂಮಿ ಮಂಜೂರು ಮಾಡಿರುವುದೇ ಅಕ್ರಮ. ಡಿಸಿಗೆ 10 ಎಕರೆ ಮಾತ್ರ ಮಂಜೂರು ಮಾಡಲು ಅಧಿಕಾರ ಇದೆ. ಡಿಸಿ ಅವರು ತಮ್ಮ ವ್ಯಾಪ್ತಿ ಮೀರಿ ಮಂಜೂರು ಮಾಡಿದ್ದಾರೆ. ಹಸುಗಳಿಗೆ ಮೇವು ಬೆಳೆಯುವುದಾಗಿ ಎಂದು ಮಂಜೂರು ಮಾಡಿದ್ದಾರೆ. ಮೂಲ ಉದ್ದೇಶಕ್ಕೆ ಭೂಮಿ ಬಳಸದೆ ಕಮರ್ಷಿಯಲ್ಗೆ ಅಂದರೆ ಸೋಲಾರ್ ಪ್ಲಾಂಟ್ ಮಾಡಲು ಹೊರಟ್ಟಿದ್ದಾರೆ. ಕಂದಾಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದರು.