ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬೀದರ್ನಲ್ಲಿ ಹಾಡ ಹಗಲೇ ಎಟಿಎಂ ಗೆ ಹಣ ತುಂಬ ಸಿಬ್ಬಂದಿಯನ್ನು ಕೊಲೆ ಮಾಡಿ 80 ಲಕ್ಷಕ್ಕೂ ಹಣ ದೋಚಿದ್ಫು, ಮಂಗಳೂರಿನಲ್ಲಿ ಸಹ ದರೋಡೆ ಪ್ರಕರಣ ನಡೆದಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲೂ ಕೂಡ ಎಟಿಎಂ ಕಳ್ಳತನಕ್ಕೆ ಮುಸುಕುಧಾರಿ ಗ್ಯಾಂಗ್ ಯತ್ನಿಸಿದೆ.
ಹೌದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಉದ್ಯಾವರದಲ್ಲಿ ಈ ಘಟನೆ ನಡೆದಿದ್ದು, ಕೆನರಾ ಬ್ಯಾಂಕಿನ ಎಟಿಎಂ ಬಾಕ್ಸ್ ಒಡೆಯಲು ಮುಸುಕುದಾರಿ ಮೂವರು ವ್ಯಕ್ತಿಗಳು ಯತ್ನಿಸಿದ್ದಾರೆ. ಮಷೀನ್ ಒಳಗಿಂದ ಸೈರನ್ ಕೂಗುತ್ತಿದ್ದಂತೆ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಇದೀಗ ಬಲೆ ಬೀಸಿದ್ದಾರೆ.
		







