ಬೆಳಗಾವಿ : ಇತ್ತೀಚಿಗೆ ಕಲ್ಬುರ್ಗಿಯ ಕೇಂದ್ರ ಕಾರಾಗೃಹ ಜೈಲಿನಲ್ಲಿ ಕೈದಿಗಳು ಸಿಗರೇಟ್ ಸೇದುತ್ತಾ ಗುಟ್ಕಾ ಹಾಗೂ ಮದ್ಯ ಸೇವಿಸುತ್ತಾ ಇಸ್ಪೀಟ್ ಆಡುತ್ತಿರುವ ಫೋಟೋ ವಿಡಿಯೋ ವೈರಲ್ ಆಗಿದ್ದವು. ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೂಡ ಕೈದಿಗಳು ಆರಾಮಾಗಿ ಇಸ್ಪೀಟ್ ಆಡುತ್ತಾ ಸಿಗರೇಟ್ ಹಾಗೂ ಮಧ್ಯ ಸೇವಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪಿಎಸ್ಐ ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ಕೈದಿಗೆ ಊಟಕ್ಕೆ ಜೈಲಿನ ಸಿಬ್ಬಂದಿಗಳೇ ಕಾರವಾರದ ಫಿಶ್ ಸರಬರಾಜು ಮಾಡುತ್ತಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಹೌದು ಇದು ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನ ಮತ್ತೊಂದು ಕರ್ಮಕಾಂಡ ಇದೀಗ ಬಯಲಾಗಿದೆ. ಜೈಲಿನ ಅಧಿಕಾರಿಗಳಿಗೆ ದುಡ್ಡು ಕೊಟ್ಟರೆ ಸಾಕು ಯಾವುದೇ ರೆಸ್ಟೋರೆಂಟ್ಗಳಲ್ಲಿನ ಸೌಲಭ್ಯಗಳಂತೆ ಕಮ್ಮಿ ಇಲ್ಲ ಎನ್ನುವಂತೆ ರಾಜಾತಿಥ್ಯ ನೀಡಲಾಗುತ್ತಿದೆ. ಇದೀಗ ಹಿಂಡಲಗಾ ಜೈಲಿನ ಕೆಲವು ಅಧಿಕಾರಿಗಳು ಕೈದಿಗಳಿಂದ ಹಣ ಪಡೆಯುವುದು ಅವರಿಗೆ ಬೇಕಾದಂತಹ ವಸ್ತುಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆದರೂ ಕೂಡ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕೈದಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತೆ ಆಗಿದೆ.
ಸದ್ಯ ಬೆಳಗಾವಿ ಹಿಂಡಗಲಾ ಜೈಲಿನಲ್ಲಿ 900 ಜನ ಕೈದಿಗಳು ಇದ್ದರೆ. ಕೈದಿಗಳಿಗೆ ಹೊರಗಿನಿಂದ ಎನೆಲ್ಲ ಬೇಕು ಆ ವಸ್ತುಗಳು ಪೂರೈಕೆಯಾಗುತ್ತಿವೆ. ಹೀಗೆ ಲಂಚದ ಹಣ ಪಡೆದ ಅಧಿಕಾರಿ ಮಾಡಿದ್ದು ಮಾತ್ರ ದೊಡ್ಡ ಯಡವಟ್ಟು. ಲಂಚದ ಹಣ ಪಡೆದು, ಜೈಲಿನ ಒಳಗೆ ಕಾರವಾರದ ಮೀನನ್ನು ಸಪ್ಲೆ ಮಾಡಿದ್ದಾನೆ. ಹೌದು ಜೈಲಿನ ಊಟದ ಮೆನುನಲ್ಲಿ ವಾರಕ್ಕೆ ಒಮ್ಮೆ ಚಿಕನ್, ಮಟನ್ ಕೊಡಬೇಕು ಎನ್ನುವುದು ಇದೆ. ಆದರೇ ಹಿಂಡಲಗಾ ಜೈಲಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿ ಫಿಷ್ ಪೂರೈಕೆ ಮಾಡಿದ್ದಾರೆ. ಪಿಎಸ್ಐ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದ ಕೈದಿಯೊಬ್ಬನಿಗೆ ಬೇಕಾದ ಸೌಲಭ್ಯ ನೀಡಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಅಂದರೆ 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಪಿಎಸ್ಐ ಜಗದೀಶ ಮರ್ಡರ್ ಕೇಸ್ ನಲ್ಲಿ ಹರೀಶಬಾಬು ಎನ್ನುವ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಹರೀಶ ಬಾಬು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದು, ಈತನೇ ತನ್ನ ಆಪ್ತರ ಮೂಲಕ ಜೈಲಾಧಿಕಾರಿಗಳಿಗೆ ಲಂಚ ನೀಡಿದ್ದಾನೆ. ಬಳಿಕ ಜೈಲಿನ ಒಳಗೆ ಕಾರವಾರದಿಂದ ಮೀನು ಸರಬರಾಜು ಮಾಡಲಾಗಿದೆ. ಕಾರವಾರದಿಂದ ಜೈಲಿನ ಅಧಿಕಾರಿಗಳಿಗೆ ಹಣ ನೀಡಿ ವಿವಿಧ ಮೀನಗಳನ್ನು ಕೆಜಿಗಟ್ಟೆಲೇ ತರಿಸಿಕೊಂಡು ಭರ್ಜರಿ ಪಾರ್ಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.