ಕೊಪ್ಪಳ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈ ಹಿಂದೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಜೈಲುವಾಸ ಅನುಭವಿಸಿದ್ದರು. ಇದೀಗ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿರೋದು ಬಯಲಾಗಿದೆ.
ಹೌದು ನಿವೃತ್ತ ನ್ಯಾಯಾಧೀಶ ಸುದಾಂಶು ದುಲಿಯಾ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಸಮಿತಿ ರಚಿಸಿತ್ತು. ತಿಂಗಳ ಹಿಂದೆ ಡ್ರೋನ್ ಸರ್ವೇ ನಡೆಸಿದ್ದ ಸಮಿತಿ ಸಲ್ಲಿಸಿರುವ ವಿಸ್ತೃತ ವರದಿಯಲ್ಲಿ ರೆಡ್ಡಿ ಅಕ್ರಮ ಉಲ್ಲೇಖಿಸಿದೆ. ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಜನಾರ್ದನ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಪಡೆದಿದ್ದ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ.
ಕರ್ನಾಟಕ ಮತ್ತು ಆಂಧ್ರದ ನಡುವಿನ ಗಡಿನಾಶ ಪಡಿಸಿ, ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅಕ್ರಮ ಅದಿರು ಸಾಗಾಟ ಮಾಡಿದ ಆರೋಪ ಇದೆ. ಈಗಾಗಲೇ ಅಕ್ರಮ ಸಾಬೀತಾಗಿ ಆಂಧ್ರದ ಸಿಬಿಐ ಕೋರ್ಟ್ ರೆಡ್ಡಿಗೆ ಶಿಕ್ಷೆಯನ್ನೂ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿರೆಡ್ಡಿ ನೀಡಿದ್ದ ವರದಿ ಅನ್ವಯ ಕೋರ್ಟ್ ಹೊಸ ಸಮಿತಿ ರಚಿಸಿತ್ತು. ಸದ್ಯ ಈಗಿನ ನಿವೃತ್ತ ನ್ಯಾ.ದುಲಿಯಾ ಸಮಿತಿ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎನ್ನುವುದು ದೃಢ ಪಟ್ಟಿದೆ.








