ಕಲಬುರ್ಗಿ : ಇಂದು ಬೆಳ್ಳಂ ಬೆಳಗ್ಗೆ ಕಲ್ಬುರ್ಗಿ ನಗರದ ಕಾಕಡೆ ಚೌಕ್ ಬಳಿ ರೌಡಿಶೀಟರ್ ಅನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಈ ಒಂದು ಘಟನೆ ನಡೆದ ಬಳಿಕ ಕಲ್ಬುರ್ಗಿಯಲ್ಲಿ ಮತ್ತೊಂದು ಭೀಕರವಾದ ಕೊಲೆ ಆಗಿರುವ ಘಟನೆ ವರದಿಯಾಗಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರಿಯಕರನನ್ನು ಪತಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಶಾಂತಿ ನಗರದ ನಿವಾಸಿ ಅಹಮದ್ ಫಜಲ್ ಅಲಿಯಾಸ್ ಬಬ್ಲೂ (30) ಎಂದು ತಿಳಿದುಬಂದಿದ್ದು, ಈತನನ್ನು ಕೊಲೆ ಮಾಡಿರುವ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಇದೀಗ ಅಶೋಕ್ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಂದ್ರಶೇಖರ ಪತ್ನಿ ನಿರ್ಮಲಾ ಅವರು 6 ವರ್ಷಗಳ ಹಿಂದೆ ಫಜಲ್‌ಗೆ ಪರಿಚಯವಾಗಿದ್ದರು. ಆಗಾಗ ಅವರ ಮನೆಗೆ ಹೋಗಿ ಬರುವುದು ಮಾಡುತ್ತಿದ್ದನು.
ಮಾರ್ಚ್ 2ರ ಸಂಜೆ 4ರ ಸುಮಾರಿಗೆ ಶಾಂತಿ ನಗರದಲ್ಲಿರುವ ಚಂದ್ರಶೇಖರ ಮನೆಗೆ ಫಜಲ್ ಹೋಗಿದ್ದರು. ಪತ್ನಿಯೊಂದಿಗಿನ ಸಂಬಂಧದಿಂದ ರೋಸಿ ಹೋಗಿದ್ದ ಚಂದ್ರಶೇಖರ ಫಜಲ್ ಜೊತೆ ಗಲಾಟೆ ಮಾಡಿ ಫಜಲ್ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದರು.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದು, ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.