ಕಲಬುರ್ಗಿ : ನಿನ್ನೆ ತಾನೆ ಕಲ್ಬುರ್ಗಿಯ ಶಹಾಬಜಾರ್ ನಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ಈ ಘಟನೆ ಮಾಸುವ ಮುನ್ನವೇ ಕಲ್ಬುರ್ಗಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಹೌದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಾವಳೇಶ್ವರ ಕ್ರಾಸ್ ಬಳಿ ತಡರಾತ್ರಿ ರೌಡಿಶೀಟರ್ ಬರ್ಬರ ಕೊಲೆಯಾಗಿದೆ. ಸುಧಾಕರ್ (32) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಮಂಗಳವಾರ ತಡರಾತ್ರಿ ಸಹೋದರನ ಜೊತೆ ಬೈಕ್ ಮೇಲೆ ತೆರಳುವಾಗ ದುಷ್ಕರ್ಮಿಗಳು ದಾಳಿ ನಡೆಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಸುಧಾಕರನ ಸಹೋದರನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ








