ಬೀದರ್ : ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಜಿಲ್ಲೆಯ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಕಂಟೆಪ್ಪ ಜಿರ್ಗೆ (65) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಕಂಟೆಪ್ಪಾ ಅವರು ಸಂಬಂಧಿಕರೊಂದಿಗೆ ಭಾನುವಾರ ಕುಂಭಮೇಳಕ್ಕೆ ತೆರಳಿದ್ದರು.ಸೋಮವಾರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ನಂತರ ಮರಳಿ ಉತ್ತರ ಪ್ರದೇಶದ ಕಾಶಿ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಬುಧವಾರ ಬೆಳಗ್ಗೆ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮ ಠಾಣಾಕುಶನೂರದಲ್ಲಿ ನಡೆಯಲಿದೆ.ನಿನ್ನೆ ಸಹ ತುಮಕೂರು ಜಿಲ್ಲೆಯ ಶಿರಾ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು.
ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ ದಲ್ಲಿ ಭಾಗವಹಿಸಿ ವಾಪಸ್ ಬರುವ ವೇಳೆ ರೈಲಿನಲ್ಲಿ ಹೃದಯಾಘಾತದಿಂದ ಬೆಳಗಾವಿಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಅದೇ ರೀತಿ ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.ಇದೀಗ ಬೀದರ್ ಹಾಗೂ ಶಿರಾ ಮೂಲದ ಇಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದಾರೆ.