ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸದಂತೆ ಸಾಕಷ್ಟು ಬಾರಿ ಸರ್ಕಾರ ಹಾಗೂ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದರೂ, ಸಹ ಇದೀಗ ವಿದ್ಯಾರ್ಥಿಗಳಿಂದ ಶೌಚಾಲಯ ಗುಂಡಿಯಿಂದ ಹೊರ ಬಂದ ಮಲವನ್ನು ಸ್ವಚ್ಛ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೌದು ಯಲಹಂಕದ ಸರ್ಕಾರಿ ಶಾಲೆಯಲ್ಲಿ ಇಂತಹದೊಂದು ಹೇಯ್ಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದ್ದು, 7, 8 ಮತ್ತು 9 ನೇ ತರಗತಿ ಕೆಲ ವಿದ್ಯಾರ್ಥಿಗಳು ಶೌಚಾಲಯ ಗುಂಡಿಯನ್ನು ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದೆ.
ದೂರು ಸಲ್ಲಿಕೆ
ಈ ಸಂಬಂಧ ಬೆಳ್ತೂರು ಪರಮೇಶ್ ಎಂಬುವರು ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಕ್ಕಳ ಆಯೋಗಕ್ಕೆ ಶಾಲೆಯ ಪ್ರಾಂಶುಪಾಲರಾದ ಕನ್ನಮ್ಮ ಮತ್ತು ಕನ್ನಡ ಶಿಕ್ಷಕ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.ಈ ಒಂದು ಘಟನೆ ಮಾರ್ಚ್ 8 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಶಾಲೆಯ ಪ್ರಾಂಶುಪಾಲರಾದ ಕನ್ನಮ್ಮ ಮತ್ತು ಕನ್ನಡ ಶಿಕ್ಷಕ ಶಿವಕುಮಾರ್ ಒತ್ತಾಯ ಪೂರ್ವಕವಾಗಿ ಕೆಲ ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛ ಮಾಡಿಸಿದ್ದಾರೆ.
ಇದು ಶಿಕ್ಷಣ ಹಕ್ಕು ಕಾಯ್ದೆ, ಮಕ್ಕಳು ಹಕ್ಕು ಕಾಯ್ದೆ ಉಲ್ಲಂಘನೆ ಆಗಿದೆ. ಈ ರೀತಿ ಕೆಲಸ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಪರಮೇಶ್ ಕೋರಿದ್ದಾರೆ.