ಬೆಳಗಾವಿ : ಕಳೆದ ವರ್ಷ ಬೆಳಗಾವಿ ತಾಲೂಕಿನ ವಂಟಮೂರಿ ಎಂಬ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ನಡು ರಸ್ತೆಯಲ್ಲೆ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದ ಘಟನೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಂತದ್ದೇ ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಗಲಾಟೆ ನಡೆದು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹೌದು 4 ಎಕರೆ 19 ಗುಂಟೆ ಜಮೀನು ವಿಚಾರಕ್ಕೆ ಸಂಬಂಧ ಪಟ್ಟಂತೆ ನಡೆದ ಗಲಾಟೆಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. 15ಕ್ಕೂ ಹೆಚ್ಚು ಜನ ರೈತ ಸಂಘದವರ ಮುಂದಾಳತ್ವದಲ್ಲಿ ಬಂದು ಹಲ್ಲೆ ನಡೆಸಿದರು. ನಾನು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ. ಆದರೆ, ಅವರು ಸ್ಥಳಕ್ಕೆ ತಲುಪಿದ ಬಳಿಕವೂ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಅರಬೆತ್ತಲೆಯಾಗಿಯೇ ನಾನು ಸವದತ್ತಿ ಪೊಲೀಸ್ ಠಾಣೆಗೆ ಹೋದೆ. ಆದರೆ, ಪೊಲೀಸರು ದೂರು ದಾಖಲಿಸಲಿಲ್ಲ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಘಟನೆ ಕುರಿತು ಎಸ್.ಪಿ ಸ್ಪಷ್ಟನೆ
ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ ಅವರು ಸ್ಪಷ್ಟನೆ ನೀಡಿದ್ದು, ಮಹಿಳೆಯ ಮೇಲೆ ಕೆಲ ಮಹಿಳೆಯರಿಂದಲೇ ಹಲ್ಲೆ ಆಗಿರುವ ಆರೋಪವಿದೆ. ಆದರೆ, ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ. ಈ ಬಗ್ಗೆ ಇಲ್ಲಿಯವರೆಗೂ ಮಹಿಳೆ ದೂರು ನೀಡಿಲ್ಲ.
ಫೆ.20ರಂದು ಹರ್ಲಾಪುರಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿಯ ಸಹೋದರರಿಯರ ಮಧ್ಯೆ ಗಲಾಟೆ ನಡೆದಿದೆ.ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆದಿರುವುದು ಕಂಡುಬಂದಿಲ್ಲ. ಅಲ್ಲದೇ ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಲಾಗಿದ್ದು, ಅವರು ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.