ಮಂಡ್ಯ : ಈಗಾಗಲೇ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು, ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪುರಸಭೆ ಸೈಟ್ ಮಾರಾಟದಲ್ಲೂ ಕೂಡ ಭಾರೀ ಗೋಲ್ಮಾಲ್ ಆಗಿರುವ ಆರೋಪ ಕೇಳಿ ಬರುತ್ತಿದೆ.
ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ಪುರಸಭೆ ಸೈಟ್ಗಳ ಮಾರಾಟದಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆಶ್ರಯ ಯೋಜನೆ ಅಡಿ ಸೈಟ್ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿ ಮಾಡಿ ಒಂದೇ ಸೈಟ್ ಹಲವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಳ್ಳಿ ಜನರನ್ನು ಗುರಿಯಾಗಿರಿಸಿಕೊಂಡು ಇದೀಗ ಸಾವಿರಾರು ಸೈಟ್ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಾಂಡವಪುರ ಪುರಸಭೆಯಿಂದ ಹಲವು ವರ್ಷದಿಂದ ಸೈಟ್ ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ಯೋಜನೆ ಸಮಿತಿಯಿಂದ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದೇ ಸೈಟ್ ಇಬ್ಬರಿಂದ ಮೂವರಿಗೆ ಮಾರಾಟ ಮಾಡಿ ವಂಚನೆ ಎಸಗಲಾಗಿದೆ. ಮೂಲ ಸೈಟ್ ದಾರರಿಗೆ ಮಾಹಿತಿ ಇಲ್ಲದೆ ನಿವೇಶನ ಮಾರಾಟ ಮಾಡಲಾಗಿದೆ.ಹಣ ನೀಡಿ ನಿವೇಶನ ಖರೀದಿಸಿದವರಿಗೂ ಕೂಡ ಇದೀಗ ಆತಂಕ ಹೆಚ್ಚಾಗಿದೆ. ದಂಧೆ ಕೋರರ ವಂಚನೆ ವಿಚಾರ ತಿಳಿದು ಶಾಸಕರೇ ಕಂಗಾಲಾಗಿದ್ದಾರೆ.
ಹಲವು ವರ್ಷಗಳಿಂದ ವಂಚಕರು ಸಾವಿರಾರು ಸೈಟ್ಗಳನ್ನು ಮಾರಿದ್ದಾರೆ. ಅಕ್ರಮದಲ್ಲಿ ಪುರಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳು ಶಾಮಿಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪತ್ರ ಬರೆಯಲಾಗಿದೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಶಾಸಕರ ದೂರಿನ ಮೇರೆಗೆ ಸಿಐಡಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದೆ. ಪಾಂಡವಪುರ ಪುರಸಭೆ ಸೈಟ್ ಹಂಚಿಕೆ ಗೋಲ್ಮಾಲ್ ಹಿನ್ನೆಲೆಯಲ್ಲಿ ಪುರಸಭೆಯಿಂದ ಏನ್ ಓ ಸಿ ಇದ್ದರೆ ಮಾತ್ರ ಸೈಟ್ ಸಬ್ ರಿಜಿಸ್ಟರ್ ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದ್ದಾರೆ.
ಈಗಾಗಲೇ ಮುಡಾ ಹಗರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆ ಇದೆ. ಇದರ ಮಧ್ಯ ಮಂಡ್ಯದ ಪಾಂಡವಪುರದ ಪುರಸಭೆಯಲ್ಲಿ ಅಕ್ರಮ ಸೈಟ್ಗಳ ಹಂಚಿಕೆಯು ರಾಜ್ಯ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದ್ದು, ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಿದಂತಾಗಿದೆ.