ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿದಿದ್ದು, ಕಳೆದ ಕೆಲವು ದಿನಗಳ ಹಿಂದೆ ಇಬ್ಬರು ಹಿಂದೂಗಳ ಹತ್ಯೆ ಬೆನ್ನಲ್ಲೆ, ಕಿಡಿಗೇಡಿಗಳ ದಾಳಿಯಿಂದ ಪವಾಡ ಸದೃಶವಾಗಿ ಪಾರಾಗಿ ಜೀವ ಉಳಿಸಿಕೊಂಡಿದ್ದ ಉದ್ಯಮಿ ಕೊಂಕನ್ ಚಂದ್ರ (50) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಇದೀಗ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಕೇಔರ್‌ಬಂಗಾ ಪ್ರದೇಶದಲ್ಲಿ ಮೆಡಿಕಲ್ ಶಾಪ್ ಮುಚ್ಚಿ ಬುಧವಾರ (ಡಿ.31) ರಾತ್ರಿ 9 ಗಂಟೆ ಸುಮಾರಿಗೆ ಮನೆ ಕಡೆ ಬರುತ್ತಿದ್ದ ಕೊಂಕನ್ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲವು ಬಾರಿ ಹೊಟ್ಟೆಗೆ ಇರಿದು, ಪೆಟ್ರೋಲ್‌ಹಾಕಿ ಬೆಂಕಿ ಹಚ್ಚಿದ್ದರು.
ದೃಷ್ಟವಶಾತ್ ಪಕ್ಕದಲ್ಲೇ ಇದ್ದ ನೀರಿದ್ದ ಕೆರೆಗೆ ಜಿಗಿದು ಕೊಂಕನ್ ಪ್ರಾಣ ಉಳಿಸಿಕೊಂಡಿದ್ದರು. ನಂತರ ಕೆಲ ಸ್ಥಳೀಯರು ರಕ್ಷಿಸಿ ಢಾಕಾ ಮಡಿಕಲ್ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಕೊಂಕನ್ ಚಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.








