ಬೆಂಗಳೂರು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸರ್ವೇಶ್ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ಸರ್ವೇಶ್, ವರ್ಷದ ಹಿಂದೆ ಪತ್ನಿ ಮತ್ತು ಮಗನ ಜೊತೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕೋನಪ್ಪನ ಅಗ್ರಹಾರ ಪುರಸಭೆಯ ಬಳಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ, ಕುಡಿತದ ಚಟದಿಂದ ಈತ ಬಲಿಯಾಗಿದ್ದಾನೆ. ಆರೋಪಿಗಳು ಪಾರ್ಕಿಂಗ್ ಟೈಲ್ಸ್ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸರ್ವೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಸರ್ವೇಶ್ ನನ್ನು ಕೊಲೆಗೈದ ಆರೋಪಿಗಳನ್ನು ಜಾರ್ಖಂಡ್ನ ರಾಹುಲ್ ಕುಮಾರ್ (27), ಸಹದೇವ್ ತುರಿ (45) ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.