ಬೀದರ್ : ರಾಜ್ಯದಲ್ಲಿ RSS ಪಥ ಸಂಚಲನದಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.ಇದರ ಬೆನ್ನಲ್ಲೀ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಿಡಿಒ ಅಧಿಕಾರಿಯೊಬ್ಬರನ್ನು RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೋರ್ವ ಸರ್ಕಾರಿ ಅಧಿಕಾರಿ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಳಿಸಲಾಗಿದೆ.
ಹೌದು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದ ಆರೋಪ ಮೇಲೆ ಮೊನ್ನೆ ಅಷ್ಟೇ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯ್ತಿ ಪಿಡಿಒ ಒಬ್ಬರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅಮಾನತು ಮಾಡಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳ ನಡುವೆ ಇದೀಗ ಮತ್ತೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಹಾಯಕರಾದ ಪ್ರಮೋದ್ ರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಸೆಪ್ಟೆಂಬರ್ 13 ರಂದು ಬಸವಕಲ್ಯಾಣದಲ್ಲಿ ನಡೆದ RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದೆಂದು ಪ್ರತಿಯಲ್ಲಿ ಉಲ್ಲೇಖಿಸಿ ತಾಲೂಕಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಘಟನೆ ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ನೌಕರರಲ್ಲಿ ಆತಂಕ ಮೂಡಿಸಿದೆ.