ಬೆಂಗಳೂರು : ಬೆಂಗಳೂರಲ್ಲಿ ದಿನೇ ದಿನೇ ಅಗ್ನಿ ದುರಂತ ಪ್ರಕರಣಗಳ ಸಂಖ್ಯೆ ಹೆಚ್ಚುತಲೆ ಇದೆ. ಇದೀಗ ಬೆಂಗಳೂರು ಹೊರವಲಯದ ಆನೇಕಲ್ ಬಳಿ ಇರುವ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಗಮ್ ಟೇಪ್ ತಯಾರಿಕಾ ಕಾರ್ಖಾನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ.
ಹೌದು ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ಇರುವ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಟೆಕ್ನೆವಾ ಟೇಪ್ಸ್ ಪ್ರೈ. ಲಿ. ಎಂಬ ಕಾರ್ಖಾನೆಯಲ್ಲಿ ಈ ಒಂದು ಅಗ್ನಿ ಅನಾಹುತ ಸಂಭವಿಸಿದೆ.ಭಾರಿ ಬೆಂಕಿ ಹಿನ್ನೆಲೆಯಲ್ಲಿ ಸಮೀಪದ ಕಾರ್ಖಾನೆಗಳ ಸಿಬ್ಬಂದಿಯೂ ಆತಂಕಗೊಂಡರು. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ದೌಡಾಯಿಸಿದ್ದು, ಹೆಚ್ಚಿನ ಅನಾಹುತ ತಡೆಯುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಗಮ್ ಟೇಪ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಸುಲಭವಾಗಿ ಹೊತ್ತಿಕೊಳ್ಳುವ ರಾಸಾಯನಿಕ ಇರುವುದು ಬೆಂಕಿಯ ತೀವ್ರತೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.ಬೆಂಕಿಗೆ ಇಡೀ ಕಾರ್ಖಾನೆ ಆಹುತಿಯಾಗಿದ್ದು, ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಹತ್ತಿರದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಆನೇಕಲ್ ಭಾಗದ ಅಗ್ನಿಶಾಮಕ ದಳದ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಡುತ್ತಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿತೊ ಅಥವಾ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತೊ ಎಂಬುದರ ಕುರಿತು ಇದುವರೆಗೂ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸ್ರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಬಂದಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬೆಂಕಿಯಿಂದ ನಷ್ಟವಾದ ಕಚ್ಚಾ ವಸ್ತು ಹಾಗೂ ಇತರ ವಸ್ತುಗಳ ಮೌಲ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯ
ಇನ್ನು ಇನ್ನೊಂದು ಘಟನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು 5 ಜನ ಗಾಯಗೊಂಡಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯ ಮನೆಯೊಂದರಲ್ಲಿ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯ ಮನೆಯೊಂದರಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.ಗಾಯಗೊಂಡಿರುವಂತವರನ್ನು ನೇಪಾಳ ಮೂಲದ ಕುಟುಂಬದವರು ಎಂಬುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.