ಉತ್ತರಪ್ರದೇಶ : ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಪ್ರಕರಣ ಖಂಡಿಸಿ ದೇಶದ ತುಂಬೆಲ್ಲಾ ಪ್ರತಿಭಟನೆ ನಡೆಯುತ್ತಿದೆ.ಈ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಪ್ರದೇಶದಲ್ಲಿ ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಮೇಲೆ ವೈದ್ಯನಿಂದ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.
ಹೌದು ನೈಟ್ ಡ್ಯೂಟಿಯಲ್ಲಿದ್ದ ಮಹಿಳಾ ನರ್ಸ್ ಮೇಲೆ ಡಾಕ್ಟರ್ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಮುರಾದಾಬಾದ್ ನಗರದಲ್ಲಿ ನಡೆದಿದೆ. ಘಟನೆ ಕುರಿತಂತೆ ಸಂತ್ರಸ್ತೆಯ ತಂದೆ ಹೇಳಿಕೆ ನೀಡಿದ್ದು, ಕೋಣೆಯಲ್ಲಿದ್ದ ಡಾಕ್ಟರ್ ಮಗಳ ಮೇಲೆ ಹಲ್ಲೆಗೈದು ಅತ್ಯಾಚಾರ ನಡೆಸಿದ್ದಾನೆ. ನಂತರ ಅವಾಚ್ಯ ಶಬ್ದಗಳಿಂದ ಮಗಳನ್ನು ನಿಂದಿಸಿದ್ದಾನೆ.
ಈ ವೇಳೆ ಆಕೆಯ ಬಳಿಯಲ್ಲಿದ್ದ ಮೊಬೈಲ್ ಸಹ ಕಸಿದುಕೊಂಡಿದ್ದಾನೆ. ಮರುದಿನ ಬೆಳಗ್ಗೆ ಮುಖ್ಯ ನರ್ಸ್ ಬಂದಾಗ ಮಗಳನ್ನು ಹೊರಗೆ ಕಳುಹಿಸಲಾಗಿದೆ. ನಡೆದ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿತ್ತು ಎಂದು ಸಂತ್ರಸ್ತೆ ತಂದೆ ಹೇಳಿಕೆ ನೀಡಿದ್ದಾರೆ.
ಯುವತಿ ಮನೆಗೆ ಬರುತ್ತಿದ್ದಂತೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ನಂತರ ಪೋಷಕರ ಜೊತೆ ತೆರಳಿ ಈ ಸಂಬಂಧ ಸಂತ್ರಸ್ತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಾಕ್ಟರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ವೈದ್ಯನನ್ನು ಬಂಧಿಸಲಾಗಿದ್ದು, ಅತ್ಯಾಚಾರಕ್ಕೆ ಸಹಕಾರ ನೀಡಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಂತ್ರಸ್ತೆ ಮುರಾದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.