ಕಲಬುರ್ಗಿ : ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವ ಘೋಷಣೆ ವಿವಾದ ಹಿನ್ನೆಲೆ ಇದೀಗ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವುದಾಗಿ ಯತ್ನಾಳ್ ಕೊಪ್ಪಳದಲ್ಲಿ ಘೋಷಿಸಿದ್ದರು. ಈ ಹೇಳಿಕೆಯನ್ನು ಖಿದ್ಮತ್-ಎ-ಮಿಲ್ಲತ್ ಕಮಿಟಿಯ ಅಧ್ಯಕ್ಷ ಜುನೈದ್ ಖುರೇಶಿ ಖಂಡಿಸಿ, ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಪ್ಪಳದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಭೇಟಿ ನೀಡಿದಾಗ ಶಾಸಕ ಯತ್ನಾಳ್ ಈ ಹೇಳಿಕೆ ನೀಡಿದ್ದರು.
ದೂರಿನಲ್ಲಿ ಯತ್ನಾಳ್‌ರ ಹೇಳಿಕೆ ಸಮುದಾಯಗಳ ನಡುವೆ ವಿಭಜನೆ, ಒಂದು ಧರ್ಮದ ವಿರುದ್ಧ ದ್ವೇಷ ಹರಡುವಿಕೆ ಮತ್ತು ಸಾಮಾಜಿಕ ಶಾಂತಿಗೆ ಭಂಗ ತರುವಂತಿದೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಬಿಎನ್‌ಎಸ್ ಕಾಯ್ದೆಯ ಕಲಂ 196, 299, 353(1)(c), ಮತ್ತು 353(2) ಅಡಿ ದಾಖಲಿಸಲಾಗಿದೆ.