ದಾವಣಗೆರೆ: ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಸಂಬಳ ಬಂದಿಲ್ಲವೆಂದು ಮನನೊಂದು ಅಂಗನವಾಡಿ ಸಹಾಯಕಿಯೊಬ್ಬಳು ಸಾಲ ತೀರಿಸಲು ಹಣ ಇಲ್ಲದ್ದರಿಂದ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೆಟಿಜೆ ನಗರದ ಡಾಂಗೇ ಪಾರ್ಕ್ ಆವರಣದ ಅಂಗನವಾಡಿ ಕೇಂದ್ರ ಸಹಾಯಕಿ ಭಾರತಿ ಆ್ಯಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ ಎಂದು ತಿಳಿದುಬಂದಿದೆ. ಪತಿ ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದು, ಅಂಗನವಾಡಿ ನೌಕರಿ ಮಾಡಿ ಬರುವ ವೇತನದಲ್ಲಿ ಭಾರತಿ ಪುಟ್ಟ ಕುಟುಂಬ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.
ಕಳೆದ 3 ತಿಂಗಳಿನಿಂದ ಅಂಗನವಾಡಿ ವೇತನ ಬಾರದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ದಿಕ್ಕೇ ತೋಚದಂತಾಗಿ ಆ್ಯಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ, ಮಕ್ಕಳು, ನೆರೆಹೊರೆಯವರು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.








