ಬೆಳಗಾವಿ : ವಿಧಾನಸಭೆ ಮತ್ತು ಪರಿಷತ್ ಕಲಾಪದಲ್ಲೂ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ್ದಾರೆ.ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಅಮಿತ್ ಶಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಚರ್ಚೆಗೆ ಆಗ್ರಹಿಸಿದರು. ಸದನದಲ್ಲಿ ನಿರ್ಣಯ ಕೈಗೊಳಲು ಒತ್ತಾಯಿಸಿದರು.
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಅಂಬೇಡ್ಕರ್ ಫೋಟೋ ಹಿಡಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು. ಆಸನದ ಮುಂದೆ ಅಂಬೇಡ್ಕರ್ ಫೋಟೋ ಹಿಡಿದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕುಳಿತಿದ್ದಾರೆ.
ಸದನದ ಬಾವಿಗೆ ಇಳಿದು ಕಾಂಗ್ರೆಸ್ ಸದಸ್ಯರು ಜಮಾಯಿಸಿದ್ದಾರೆ. ವಿಪಕ್ಷ ಬಿಜೆಪಿ ಶಾಸಕರಿಂದಲೂ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಸದನದಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರಿಂದ ತೀವ್ರ ಗದ್ದಲ ಮತ್ತು ಕೋಲಾಹಲ ಉಂಟಾಯಿತು. ವಿಧಾನಸಭೆಯಲ್ಲಿ ತೀವ್ರ ಗದ್ದಲ ಹಿನ್ನೆಲೆಯಲ್ಲಿ ಕೆಲಕಾಲ ಕಲಾಪ ಮುಂದೂಡಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಶಾ ಅವರನ್ನು ಸಮರ್ಥಿಸಿ ಸದನದಿಂದ ಹೊರ ನಡೆದರು.ಬಳಿಕ ಆಡಳಿತ ಪಕ್ಷದ ಸದಸ್ಯರು ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಅತ್ಯಂತ ಜೋಡಿಸಿಟ್ಟರು.ಆ ವೇಳೆ ಸದನ ಅಂಬೇಡ್ಕರ್ ಪ್ರಭೆಯಿಂದ ಕಂಗೊಳಿಸಿದ ದೃಶ್ಯವನ್ನು ಈ ಒಂದು ಚಿತ್ರದಲ್ಲಿ ಕಾಣಬಹುದಾಗಿದೆ.