ಬೆಂಗಳೂರು : ಬೆಂಗಳೂರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳ ಹಾವಳಿ ಮುಂದುವರೆದಿದ್ದು, ನಿನ್ನೆ ತಾನೇ ಇಟಲಿ, ಜಪಾನ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದೀಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಕೂಡ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ಆರ್ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ ‘5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
gaina_ramesh@outlook.com ವಿಳಾಸದಿಂದ bangalore.visa@esteri.it ಗೆ ಸಂದೇಶ ಕಳುಹಿಸಿ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂದು ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಇಟಲಿ, ಜಪಾನ್ ಹಾಗೂ ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದಿರುವ ಬೆದರಿಕೆ ಸಂದೇಶಗಳ ಮೂಲ ಪತ್ತೆಗೆ ಪೊಲೀಸರು ಇ-ಮೇಲ್ ಐಡಿ ಹಾಗೂ ಕರೆಗಳ ಜಾಡು ಬೆನ್ನತ್ತಿದ್ದಾರೆ.








