ಮೈಸೂರು : ಹಂದಿ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಕೇರಳ ಮೂಲದ ಮ್ಯಾನೇಜರ್ ನನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡಿಗೆ ಸಮೀಪದ ಹೆಬ್ಬಳ್ಳ ಗ್ರಾಮದಲ್ಲಿ ನಡೆದಿದೆ.
ಹತ್ಯೆಗೊಳಗಾದ ವ್ಯಕ್ತಿಯನ್ನು ಕೇರಳದ ವಯನಾಡ್ ಜಿಲ್ಲೆಯ ಗಿರೀಶ್ ಅಬ್ರಹಂ(38) ಎಂದು ತಿಳಿದುಬಂದಿದೆ.ಹಂತಕನನ್ನು ಶಂಸುದ್ದಿನ್ ಎಂದು ಹೇಳಲಾಗುತ್ತಿದ್ದು, ಇಬ್ಬರು ಕೂಡ ಒಂದೇ ಹಂದಿ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದರು.ಆರೋಪಿ ಶಂಸುದ್ದೀನ್ ತನಗೆ ಹೆಚ್ಚಿನ ಕೆಲಸ ಹೇಳುವುದು, ತನ್ನ ವಿರುದ್ದ ಮಾಲಕರಿಗೆ ಚಾಡಿ ಹೇಳುತ್ತಾನೆಂಬ ಕಾರಣಕ್ಕೆ ಶುಕ್ರವಾರ ರಾತ್ರಿ ಶೆಡ್ನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಶಂಸುದ್ದೀನ್ ಚಾಕುವಿನಿಂದ ಗಿರೀಶ್ ಬೆನ್ನಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಸಹಕಾರ್ಮಿಕರು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಿರಿಶ್ ಅಬ್ರಹಂ ಕೊಲೆ ಸಂಬಂಧ ಸಹೋದರ ವಿನೋದ್ ಅಬ್ರಹಂ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.