ಶಿವಮೊಗ್ಗ : ಶಿವಮೊಗ್ಗದಲ್ಲಿ ಮತ್ತೊಂದು ಘೋರವಾದ ದುರಂತವೊಂದು ನಡೆದಿದ್ದು, ಜಮೀನೊಂದರ ಕೃಷಿ ಹೊಂಡಕ್ಕೆ ಯುವಕರಿಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡವಾಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಮೃತ ಯುವಕರನ್ನು ಯಡವಾಲ ಗ್ರಾಮದ ನಿವಾಸಿ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಬಡಾವಣೆ ನಿವಾಸಿ ಚಿರಂಜೀವಿ (22) ಎಂದು ತಿಳಿದುಬಂದಿದೆ.ಘಟನೆಯಲ್ಲಿ ಹೊಂಡಕ್ಕೆ ಬಿದ್ದಿದ್ದ ಮತ್ತೋರ್ವ ಯುವಕ ಈಜಿ ದಡ ಸೇರಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಗೌತಮ್ ಅವರ ಕುಟುಂಬಕ್ಕೆ ಸೇರಿದ ತೋಟದ ಪಕ್ಕದ ಜಮೀನೊಂದರ ಬಳಿ ಘಟನೆ ನಡೆದಿದೆ. ರಾತ್ರಿ ಗೌತಮ್ ಸುಮಾರು 10 ಜನ ಸ್ನೇಹಿತರ ಜೊತೆಗೂಡಿ ತೋಟಕ್ಕೆ ಹೋಗಿದ್ದರು. ಈ ವೇಳೆ ಕೃಷಿ ಹೊಂಡದಿಂದ ನೀರು ತರಲು ಹೋದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು ಈತನ ರಕ್ಷಣೆಗೆ ಹೋದ ಮತ್ತೋರ್ವನು ನೀರು ಪಾಲಾಗಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಆಗಮಿಸಿದೆ. ಕೃಷಿ ಹೊಂಡದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದೆ.ಘಟನೆ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.