ರಾಮನಗರ : ರಾಜ್ಯದಲ್ಲಿ ಈಗಾಗಲೇ ವರುಣ ಅಬ್ಬರಿಸುತ್ತಿದ್ದು ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ. ಇಂದು ಭಾರಿ ಮಳೆಗೆ ಬೆಂಗಳೂರಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ್ದಾರೆ.
ಹೌದು ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೈಜಿಗುಡ್ಡ ಡ್ಯಾಮ್ ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಡ್ಯಾಮ್ ನಲ್ಲಿ ಮುಳುಗಿ ಬೆಂಗಳೂರು ಮೂಲದ ರಾಘವಿ (18) ಮಧುಮಿತ (20) ಹಾಗೂ ರಮ್ಯಾ (22) ಮೃತ ಯುವತಿಯರು ಎಂದು ತಿಳಿದುಬಂದಿದೆ.
ಜಲಾಶಯ ವೀಕ್ಷಣೆಗೆ ಎಂದು 7 ಯುವತಿಯರು ತೆರಳಿದ್ದಾರೆ. ಓರ್ವ ಯುವತಿ ನೀರಿಗೆ ಬಿದ್ದಿದ್ದ ವೇಳೆ ರಕ್ಷಣೆಗೆ ಉಳಿದ ಸ್ನೇಹಿತೆಯರು ಧಾವಿಸಿದ್ದಾರೆ. ಯುವತಿಯ ರಕ್ಷಣೆಗಾಗಿ 7 ಯುವತಿಯರು ನೀರಿಗೆ ಧುಮುಕಿದ್ದಾರೆ. ಕೂಡಲೇ ಸ್ಥಳೀಯ ಓರ್ವ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವನಿಸಲಾಗಿದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.