ರಾಯಚೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಪಟಾಕಿ ಸಿಡಿದು ಬಾಲಕನೋರ್ವ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಯಚೂರಲ್ಲಿ ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ಯುವಕನನ್ನು ರಾಯಚೂರು ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದ ನರಸಿಂಹ (22) ಎಂದು ತಿಳಿದುಬಂದಿದೆ. ಹನುಮಾಪುರ ಬಳಿ ರಾಜೊಳ್ಳಿಬಂಡಾ ಕಾಲುವೆಯಲ್ಲಿ ಗಣೇಶ ವಿಸರ್ಜನೆಗೆ ಹೊರಟಿದ್ದ ವೇಳೆ ಬೊಲೆರೋ ಪಿಕಪ್ ಮೇಲೆ ಗಣೇಶನನ್ನ ಹಿಡಿದು ಕುಳಿತಿದ್ದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿದೆ.
ಬೊಲೆರೋ ಪಿಕಪ್‌ನಲ್ಲಿದ್ದ ಇನ್ನುಳಿದ ಯುವಕರು ವಿದ್ಯುತ್ ಸ್ಪರ್ಶಿಸಿದ ಕೂಡಲೇ ಕೆಳಗೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ನಡುವೆಯೇ ಅದ್ದೂರಿಯಾಗಿ ಗಣೇಶನ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.