ಕಲಬುರ್ಗಿ : ಹೊಸದಿಲ್ಲಿ-ಬೆಂಗಳೂರು ಮಾರ್ಗದಲ್ಲಿ ಓಡಾಡುವ ಕರ್ನಾಟಕ ಎಕ್ಸ್ ಪ್ರೆಸ್(KK ಎಕ್ಸ್ ಪ್ರೆಸ್) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಅದೇ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ರೈಲ್ವೆ ಕಂಟ್ರೋಲ್ ರೂಮ್ ಗೆ ಬೆದರಿಕೆ ಕರೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕೆಕೆ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಅನುಮಾನವಿದೆ ಎಂದು ಪ್ರಯಾಣಿಕನೋರ್ವ ರೈಲ್ವೆ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿ-ಬೆಂಗಳೂರು ಕರ್ನಾಟಕ ಎಕ್ಸ್ ಪ್ರೆಸ್ ರೈಲನ್ನು ಇಂದು (ಮೇ 11) ಮುಂಜಾನೆ ವಾಡಿ ರೈಲು ನಿಲ್ದಾಣದಲ್ಲಿ ನಿಲ್ಲಿಸಿ 4 ಗಂಟೆಗಳ ಕಾಲ ತಪಾಸಣೆಗೊಳಪಡಿಸಲಾಯಿತು.
ಬಾಂಬ್ ನಿಷ್ಕ್ರಿಯ ದಳದ ಡಾಗ್ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗಿಳಿಸಿ ರೈಲಿನ 22 ಬೋಗಿಗಳನ್ನು ತಪಾಸಣೆ ಮಾಡಿದರು. ಬಳಿಕ ಅದೊಂದು ಹುಸಿಬಾಂಬ್ ಕರೆ ಎಂಬುದು ದೃಢಪಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಇದೀಗ ಕಲಬುರ್ಗಿಯ ವಾಡಿ ರೈಲ್ವೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ದೀಪಸಿಂಗ್ ರಾಥೋಡ್ (33) ಬಂಧಿತ ಆರೋಪಿ.
ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಾಡಿ ರೈಲ್ವೆ ಪೊಲೀಸ್ ಠಾಣೆಯ ಪಿಎಸ್ಸೈ ವೀರಭದ್ರಪ್ಪ ಎಚ್.ಎಸ್. ತಿಳಿಸಿದ್ದಾರೆ. ಆರೋಪಿ ದೀಪಸಿಂಗ್ ರಾಥೋಡ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸುಳ್ಳು ಮಾಹಿತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಗುಂತಕಲ್ ಕಡೆ ಹೊರಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.