ಬೆಂಗಳೂರು : ಬೆಂಗಳೂರಲ್ಲಿ ಸ್ನೇಹಿತೆಗೆ ಜ್ಯೂಸ್ ತರಲು ಹೋರಟಿದ್ದ ವಿದ್ಯಾರ್ಥಿನಿ ಮೇಲೆ ಮದ್ಯದ ಅಮಲಿನಲ್ಲಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಅಮಾನುಷ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿರುವ ಸೋಲದೇವನಹಳ್ಳಿ ಘಟನೆ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ನ್ಯೂಟೌನ್ ನಿವಾಸಿ 23 ವರ್ಷದ ಯುವತಿ ಹಲ್ಲೆಗೊಳಗಾದ ಸಂತ್ರಸ್ತೆ. ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಆಲ್ಟಿನ್ ಮತ್ತು ನವನೀತ್ ಎಂಬ ಇಬ್ಬರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಲದೇವನಹಳ್ಳಿ ಕಾಲೇಜಿನಲ್ಲಿ ಸಂತ್ರಸ್ತೆ ವ್ಯಾಸಂಗ ಮಾಡುತ್ತಿದ್ದು, ಸೆ.1ರಂದು ಸಂಜೆ 6.30ಕ್ಕೆ ಕಾಲೇಜಿನಲ್ಲಿ ಓಣಂ ಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಸ್ನೇಹಿತೆಯೊಬ್ಬಳು ಲೋ ಬಿಪಿಯಾಗಿ ಕುಸಿದು ಬಿದ್ದಿದ್ದು, ಆಕೆಯನ್ನು ರೂಮ್‌ಗೆ ಕರೆದೊಯ್ದಿದ್ದಾರೆ.
ಬಳಿಕ ಆಕೆಗೆ ಜ್ಯೂಸ್ ತರಲು ಸಂಜೆ 7 ಗಂಟೆಗೆ ಮತ್ತೊಬ್ಬ ಸ್ನೇಹಿತೆ ಜತೆಗೆ ಅಚ್ಯುತ್‌ನಗರದ ಬಳಿ ಸಂತ್ರಸ್ತೆ ಹೋಗುತ್ತಿದ್ದಳು. ಆಗ ಮದ್ಯದ ಅಮಲಿನಲ್ಲಿದ್ದ ಆಲ್ಟಿನ್ ಮತ್ತು ನವನೀತ್ ಅವರ ಗುಂಪು ಯುವತಿಯರನ್ನು ಚೂಡಾಯಿಸಿ ಅಶ್ಲೀಲ ಪದ ಬಳಸಿ ದುರ್ವತ್ರನೆ ತೋರಿದ್ದಾರೆ. ಇದನ್ನು ಯುವತಿ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆಲ್ಟಿನ್ ಶರ್ಟ್ ಬಿಚ್ಚಿಕೊಂಡು ಬಂದು ದೂರುದಾರೆಯ ಎದೆಗೆ ಗುದ್ದಿದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಾರೆ.
ಅಷ್ಟಕ್ಕೆ ಬಿಡದ ಪುಂಡರು ಆಕೆ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಯುವತಿ ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.