ಬೆಂಗಳೂರು : ಆಫ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಗಿರಬಹುದು ಅಥವಾ ಆನ್ಲೈನ್ ಮನಿ ಗೇಮಿಂಗ್ ನಿಂದ ಕೋಟ್ಯಾಂತರ ರೂಪಾಯಿಗಳ ಬೆಟ್ಟಿಂಗ್ ದಂಧೆ ನಡಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಶೀಘ್ರದಲ್ಲಿ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ನ ರವಿಕುಮಾರ್ ಗಣಿಗ ಅವರು ಕ್ರಿಕೆಟ್ ಬೆಟ್ಟಿಂಗ್ ಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೊಳಿಸುವಂತೆ ಗೃಹ ಸಚಿವರಲ್ಲಿ ಕೋರಿದರು. ಅದಕ್ಕೆ ಪಕ್ಷಾತೀತವಾಗಿ ಎಲ್ಲ ಶಾಸಕರು ಧ್ವನಿಗೂಡಿಸಿ, ಕ್ರಿಕೆಟ್ ಬೆಟ್ಟಿಂಗ್ ಜತೆಗೆ ಆನ್ಲೈನ್ ಮನಿ ಗೇಮಿಂಗ್ಗಳಿಗೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪರಮೇಶ್ವರ್, ಕ್ರಿಕೆಟ್ ಬೆಟ್ಟಿಂಗ್ ದಂಧೆಯು ರಾಜ್ಯಾದ್ಯಂತ ನಡೆಯುತ್ತಿದೆ. ಇದರಲ್ಲಿ ಸಾವಿರಾರು ಕೋಟಿ ರು. ಹಣದ ವ್ಯವಹಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕಾನೂನು ಕ್ರಮವನ್ನು ಬಿಗಿಗೊಳಿಸಲಾಗುವುದು ಎಂದು ತಿಳಿಸಿದರು.
ಜತೆಗೆ ಆನ್ಲೈನ್ ಮನಿ ಗೇಮಿಂಗ್ಗಳಿಂದಲೂ ಯುವಕರು ಹಾಳಾಗುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಒಟ್ಟಾರೆ ಬೆಟ್ಟಿಂಗ್ ಮತ್ತು ಆನ್ಲೈನ್ ಗೇಮಿಂಗ್ ಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗುವುದು ಎಂದರು.