ಬಳ್ಳಾರಿ : ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸರಣಿ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕಳ್ಳನೋರ್ವ ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನಿಸುತ್ತಿರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇಲ್ಲಿನ ಬ್ರೂಸ್ಪೇಟೆ ಠಾಣೆ ಪೊಲೀಸರು ಆಂಧ್ರಪ್ರದೇಶ ಮೂಲದ ಯುವಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅನಂತಪುರದ ಸಾಯಿನಗರ ನಿವಾಸಿ ಆರ್. ವೆಂಕಟೇಶ್ ಕೋಡಿಗುಡ್ಡು (22) ಎಂದು ತಿಳಿದುಬಂದಿದೆ. ಈತ ಮಂಗಳವಾರ ನಸುಕಿನ ಜಾವದ ಸಮಯದಲ್ಲಿ, ನಗರದ ಕಾಳಮ್ಮ ಸರ್ಕಲ್ ಹತ್ತಿರ ಇರುವ ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂ ಒಳಗಡೆ ಪ್ರವೇಶಿಸಿ, ಸಿಡಿಎಂ-ಎಟಿಎಂ ಮಷಿನ್ ಜಖಂಗೊಳಿಸಿ, ಹಣ ದೋಚಲು ಪ್ರಯತ್ನಿಸುತ್ತಿದ್ದ.
ಈ ವೇಳೆ ಮಾಹಿತಿ ಮೇರೆಗೆ, ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದರು. ಆದರೆ ಯುವಕ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರೋಪಿ ಎಷ್ಟೇ ಪ್ರಯತ್ನಿಸಿದರೂ ಎದೆಗುಂದದ ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.