ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹೊರವಲಯದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ದುರಂತ ಎಂದರೆ ಗಾಯಗೊಂಡವರನ್ನು ರಕ್ಷಿಸಲು ಹೋಗಿದ್ದ ವ್ಯಕ್ತಿ ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ವಿಜಯಪುರ-ಸಂಕೇಶ್ವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ (30) ಮತ್ತು ಶಿರೋಳ ತಾಲೂಕಿನ ಪುಡವಾಡ ಗ್ರಾಮದ ಶಿವಂ ಯುವರಾಜ್ ಚೌಹಾನ್ (24) ಹಾಗೂ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಗವಾಡ ಕಡೆಯಿಂದ ಅಥಣಿ ಕಡೆಗೆ ಕೆಂಪು ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿ ಹಾಗೂ ಅಥಣಿಯಿಂದ ಕಾಗವಾಡಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತವಾಗಿದೆ. ಗಾಯಗೊಂಡ ಪಿಕಪ್ ವಾಹನದ ಚಾಲಕ ಮತ್ತು ಕ್ಲೀನರ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಇದನ್ನು ಗಮನಿಸಿದ ಸ್ಕಾರ್ಪಿಯೋ ಚಾಲಕ ತನ್ನ ವಾಹನ ಸೈಡಿಗೆ ಹಾಕಿ, ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಥಣಿ ಕಡೆಯಿಂದ ಬಂದ ಇನೋವಾ ಕಾರು ನೇರವಾಗಿ ರಕ್ಷಿಸಲು ಮುಂದಾದವನಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕಾರ್ಪಿಯೋ ವಾಹನ ಚಾಲಕ ಹಾಗೂ ಇನೋವಾದಲ್ಲಿದ್ದ ಇಬ್ಬರೂ ಸೇರಿ ಒಟ್ಟು ಮೂವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೊದಲು ಅಪಘಾತವಾಗಿದ್ದ ಲಾರಿ ಹಾಗೂ ಪಿಕಪ್ ವಾಹನದ ಚಾಲಕ, ಕ್ಲೀನರ್ಗಳು ಗಾಯಾಳುಗಳಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.