ಬೀದರ್ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಯುವಕನ ಪ್ರೀತಿಸಿದ್ದಕ್ಕೆ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೇ ದೊಣ್ಣೆಯಿಂದ ಮಗಳನ್ನ ಹೊಡೆದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆಯಾದವರನ್ನು ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ.
ಮೋನಿಕಾ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಪ್ರೀತಿಯ ವಿಷಯವನ್ನು ತನ್ನ ತಂದೆಯ ಎದುರು ಪ್ರಸ್ತಾಪ ಮಾಡಿದ್ದಳು. ಆದರೆ ಮೋತಿರಾಮ ಪ್ರೀತಿ -ಪ್ರೇಮದಿಂದ ದೂರವಿರುವಂತೆ ಮಗಳಿಗೆ ಹೇಳಿ, ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದು ತಿಳುವಳಿಕೆ ಹೇಳಿದ್ದನು. ಮೋತಿರಾಮ ಬುದ್ದಿಮಾತು ಹೇಳಿದ್ದರೂ, ಸಹ ಮೋನಿಕಾ ನಾನು ಅವನನ್ನೇ ಮದುವೆ ಆಗುತ್ತೇನೆ ಎಂದು ಹಠ ಮಾಡಿದ್ದಳಂತೆ.
ತಂದೆ ಏನೆ ಬುದ್ದಿಮಾತು ಹೇಳಿದ್ರೂ ಕೇಳದ ಹಿನ್ನೆಲೆ ಕೋಪಗೊಂಡ ಮೋತಿರಾಮ, ಮನೆಯಲ್ಲಿ ಯಾರು ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋನಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.