ದಕ್ಷಿಣಕನ್ನಡ : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಪೊಲೀಸರು ಮೈಸೂರು ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿದಿದ್ದಾರೆ.
ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ ಯುವತಿ ಗರ್ಭವತಿಯಾಗಿದ್ದು ಇತ್ತೀಚೆಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಈ ಮಧ್ಯೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶ್ರೀಕೃಷ್ಣ ಜೆ.ರಾವ್ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರಂಭದಲ್ಲಿ ಜೂ.11ಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆ ಸಂದರ್ಭ ಆರೋಪಿ ಶ್ರೀಕೃಷ್ಣ ಜೆ.ರಾವ್ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರು, ಪುತ್ರನಿಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ವಿವಾಹ ಮಾಡಿಕೊಡುವುದಾಗಿ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಒಂದು ವೇಳೆ ಮಗ ವಿವಾಹಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದೆಂದೂ ತಿಳಿಸಿದ್ದರು.ಆದರೆ ಆರೋಪಿ ಶ್ರೀಕೃಷ್ಣ ಜೆ. ರಾವ್ ಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪದ ಹಿನ್ನೆಲೆಯಲ್ಲಿ ಜು.24ರಂದು ಸಂತ್ರಸ್ತ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.